WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Thursday, January 27, 2011

'ಪ್ರಜಾವಾಣಿ'ಯ ಹೊಸ ಜಾಲ ತಾಣ

ಪ್ರಿಯ ಓದುಗರೇ
ಆಧುನಿಕ ಅಗತ್ಯಗಳಿಗೆ ತಕ್ಕಂತೆ ಪುನರ್ ವಿನ್ಯಾಸಗೊಳಿಸಿದ ಪ್ರಜಾವಾಣಿ ಅಂತರ್ಜಾಲ ತಾಣ http://beta.prajavani.net ಗಣರಾಜ್ಯ ದಿನದಿಂದ (26 ಜನವರಿ 2011) ನಿಮ್ಮ ಮುಂದೆ..
63 ವರ್ಷಗಳಷ್ಟು ಅವಧಿಯ ಪತ್ರಿಕೋದ್ಯಮದಲ್ಲಿ ~ಪ್ರಜಾವಾಣಿ~ ಕಾಲಕ್ಕೆ ಅನುಗುಣವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಕನ್ನಡ ಜಗತ್ತು ಕರ್ನಾಟಕವೆಂಬ ಭೌಗೋಳಿಕ ಎಲ್ಲೆಯನ್ನು ಮೀರಿ ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದು ಮಾಹಿತಿ ತಂತ್ರಜ್ಞಾನ. ಕನ್ನಡದಲ್ಲಿ ಅಂತರ್ಜಾಲ ತಾಣಗಳುಸಾಧ್ಯ ಎಂಬುದು ಅರಿವಾದ ಆರಂಭದ ದಿನಗಳಲ್ಲೇ ~ಪ್ರಜಾವಾಣಿ~ಯನ್ನು ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸಲು ಹುಟ್ಟಿಕೊಂಡದ್ದು http://prajavani.net. ಅಂತರ್ಜಾಲದಲ್ಲಿ ~ಪ್ರಜಾವಾಣಿ~ಯನ್ನು ಓದುವವರಿಗೂ ಮುದ್ರಿತ ಆವೃತ್ತಿಯ ಅನುಭವವನ್ನೇ ನೀಡುವ ಸಾಧ್ಯತೆಯನ್ನು ತಂತ್ರಜ್ಞಾನ ತೆರೆದಿಟ್ಟಾಗ ಹುಟ್ಟಿಕೊಂಡದ್ದು http://www.prajavaniepaper.com. ಕಂಪ್ಯೂಟರ್‍ನಲ್ಲಿ ಕನ್ನಡ ಲಿಪಿಯನ್ನು ಇಂಗ್ಲಿಷ್‍ನಂತೆಯೇ ಸುಲಲಿತವಾಗಿ ಬಳಸಲುಅನುಕೂಲವಾಗುವಂತೆ ಜಾಗತಿಕ ಶಿಷ್ಟತೆಯಾದ ಯೂನಿಕೋಡ್ ಬಳಕೆಗೆ ಬಂದಾಗ ಅದನ್ನು ಬಳಸಿಕೊಂಡ ಕನ್ನಡ ಪತ್ರಿಕೆಗಳ ಜಾಲ ತಾಣಗಳಲ್ಲಿಮೊದಲನೆಯದ್ದೆಂಬ ಹೆಗ್ಗಳಿಕೆ ಕೂಡಾ ಪ್ರಜಾವಾಣಿಯದ್ದೇ.
ಈಗ ಪ್ರಜಾವಾಣಿ ಮತ್ತೊಂದು ಹಂತಕ್ಕೇರುತ್ತಿದೆ. ಅಂತರ್ಜಾಲದ ಹೊಸ ಸಾಧ್ಯತೆಗಳು ಮತ್ತು ವೆಬ್ ವಿನ್ಯಾಸಕ್ಕೆ ತಂತ್ರಜ್ಞಾನ ಒದಗಿಸಿಕೊಟ್ಟಿರುವ ಅವಕಾಶಗಳನ್ನು ಬಳಸಿಕೊಂಡು ಪ್ರಜಾವಾಣಿಯ ಅಂತರ್ಜಾಲ ತಾಣವನ್ನು ಪುನರ್ ವಿನ್ಯಾಸಗೊಳಿಸಲಾಗಿದೆ (http://beta.prajavani.net). ಈ ವಿನ್ಯಾಸ ಇಂಟರ್‍ನೆಟ್ ಎಕ್ಸ್‍ಪ್ಲೋರರ್, ಫೈರ್‍ಫಾಕ್ಸ್, ಕ್ರೋಮ್‍ನ ಹೊಸ ಆವೃತ್ತಿಗಳಲ್ಲಿ ನೋಡಲು ಅನುವಾಗುವಂತಿದೆ.
ಎಲ್ಲಾ ಸುದ್ದಿಗಳು, ಲೇಖನಗಳು ಮತ್ತು ಪುರವಣಿಗಳನ್ನು ತಲುಪಲು ಸುಲಭವಾಗುವಂತೆ ಹೊಸ ವಿನ್ಯಾಸವಿದೆ. ಛಾಯಾಚಿತ್ರಗಳನ್ನು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ವಿನ್ಯಾಸ ಅವಕಾಶ ಕಲ್ಪಿಸಿದೆ. ಮುಂದಿನ ಹಂತಗಳಲ್ಲಿ ತಂತ್ರಜ್ಞಾನದ ಇನ್ನೂ ಹಲವು ಸಾಧ್ಯತೆಗಳನ್ನು ಕನ್ನಡ ಜಗತ್ತಿಗೆ ಒದಗಿಸಿಕೊಡುವ ಆಸೆ ನಮ್ಮದು. ಇದು ನಿಮಗೆ ಇಷ್ಟವಾಗುತ್ತದೆ, ನಿಮ್ಮ ನಿರೀಕ್ಷೆಯನ್ನು ಈಡೇರಿಸುತ್ತದೆ ಎಂಬ ನಂಬಿಕೆಯೂ ನಮ್ಮದು.
ಹೊಸ ವಿನ್ಯಾಸ ಕುರಿತ ನಿಮ್ಮ ಅಭಿಪ್ರಾಯ, ಟೀಕೆ, ಸಲಹೆ, ಸುಧಾರಣೆಯ ಸಾಧ್ಯತೆ ಕುರಿತ ಅನಿಸಿಕೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಬರಹದ ಕೆಳಗೇ ನಿಮ್ಮ ಪ್ರತಿಕ್ರಿಯೆಗಳನ್ನು ಬರೆಯಬಹುದು. ಅಥವಾ ಫೀಡ್ ಬ್ಯಾಕ್ ಫಾರ್ಮ್ ತುಂಬುವ ಮೂಲಕವೂ ನಮ್ಮನ್ನು ತಲುಪಬಹುದು. ಸದ್ಯ ನಿಮ್ಮ ಮುಂದಿರುವುದು ಪ್ರಾಯೋಗಿಕ ಆವೃತ್ತಿಯಾಗಿರುವುದರಿಂದ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಅವುಗಳ ಕುರಿತು ನಮಗೆ ತಿಳಿಸಲು ಮರೆಯದಿರಿ.
ಕೆ.ಎನ್.ಶಾಂತಕುಮಾರ್
ಸಂಪಾದಕ.

ಇನ್ಮುಂದೆ ಅಂಧರೂ ಕನ್ನಡ ಓದಬಹುದು!


ಸಾಧನೆಗೆ ಅಂಧತ್ವ ಶಾಪವಲ್ಲ ಎಂದು ನಮ್ಮಲ್ಲಿ ಹಲವು ಮಂದಿ ಸಾಧಿಸಿ ತೋರಿಸಿದ್ದಾರೆ. ಹುಟ್ಟಿನಿಂದ ಅಂಧರಾದರೂ ಸಂಗೀತ ಲೋಕದಲ್ಲಿ ಅಪಾರ ಸಾಧನೆ ಮೆರೆದ ಪಂಡಿತ್ ಪುಟ್ಟರಾಜ ಗವಾಯಿ ಇರಬಹುದು. ಪ್ರಸಿದ್ಧ ಇಂಗ್ಲಿಷ್ ಸಾಹಿತಿ ಜಾನ್ ಮಿಲ್ಟನ್ ಇರಬಹುದು. ಇವರೆಲ್ಲ ಅಂಧತ್ವ ಮೆಟ್ಟಿನಿಂತು ಬದುಕಿನಲ್ಲಿ ಸಾಧನೆಗೈದಿದ್ದಾರೆ.

ಶಿವಮೊಗ್ಗದ ಶ್ರೀಧರ್ ಟಿ.ಎಸ್. ಎಂಬವರದ್ದು ಅಂಧರಿಗೆ ಅಕ್ಷರದ ಬೆಳಕು ನೀಡುವ ಸಾಧನೆ. ಕಂಪ್ಯೂಟರ್ ಪರದೆಯಲ್ಲಿರುವ ಅಕ್ಷರಗಳನ್ನು ಓದುವ "ಇ-ಸ್ಪೀಕ್" ಎಂಬ ತಂತ್ರಾಂಶವನ್ನು ಕನ್ನಡಕ್ಕೆ ತಂದಿದ್ದಾರೆ. ಇವರ ಸಾಧನೆಯಿಂದ ಅಂಧರೂ ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳನ್ನು ಓದಬಹುದು. ಇದಕ್ಕೆ ನೆರವಾದದ್ದು ಒಂದು ಬಗೆಯ ಸ್ಕ್ರೀನ್-ರೀಡರ್ ತಂತ್ರಾಂಶ. ಸುಮಾರು 6 ವರ್ಷಗಳ ಹಿಂದೆಯೇ ಈ ತಂತ್ರಾಂಶ ಬೆಳಕಿಗೆ ಬಂದಿತ್ತು. ಆದರೆ ಇದು ಕಣ್ಣಿದ್ದವರ ಗಮನಕ್ಕೆ ಬಂದಿರಲಿಲ್ಲ ಎಂದೆನಿಸುತ್ತದೆ. ಅಂಧರೊಬ್ಬರು ಇದನ್ನು ಹುಡುಕಿ ತೆಗೆದು ಅದನ್ನು ಅಭಿವೃದ್ಧಿಸಿ ಕನ್ನಡ ಬಲ್ಲ ಅಂಧರಿಗೆ ಕಣ್ಣಾಗಿದ್ದಾರೆ. ಈಗ ಈ ತಂತ್ರಾಂಶ ಇಂಟರ್ನೆಟ್ ನಲ್ಲಿ ಎಲ್ಲರಿಗೂ ಉಚಿತವಾಗಿ ದೊರಕುತ್ತದೆ.

ನೂತನ ತಂತ್ರಾಂಶದಿಂದಾಗಿ ಅಂಧರು ಕಂಪ್ಯೂಟರಿನಲ್ಲಿ ಸಾಮಾನ್ಯ ಕನ್ನಡಿಗರಂತೆ ಕನ್ನಡ ಓದಬಹುದು. "ಯುನಿಕೋಡ್-8" ಕನ್ನಡ ಅಕ್ಷರವಿರುವ ಅಂತರ್‌ಜಾಲದ ಎಲ್ಲಾ ಕನ್ನಡ ವೆಬ್‌ಸೈಟ್‌ಗಳನ್ನೂ ಸಂದರ್ಶಿಸಿ ತಮಗೆ ಬೇಕಾದ ಯಾವುದೇ ವಿಷಯವನ್ನಾದರೂ ಕಂಪ್ಯೂಟರ್‌ನ ಸಹಾಯದಿಂದ ತಿಳಿದುಕೊಳ್ಳಬಹುದು.

ಅಂಧರು ಹೇಗೆ ಕಂಪ್ಯೂಟರ್ ಬಳಸುತ್ತಾರೆ? ಹೇಗೆ ಕನ್ನಡ ಓದುತ್ತಾರೆ? ಎಂಬ ಸೋಜಿಗದ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಪರದೆಯಲ್ಲಿ ಮೂಡುವ ಅಕ್ಷರಗಳನ್ನು ನೋಡಲು ಅವರಿಗೆ ಕಣ್ಣಿಲ್ಲ. ಆದರೆ ಸ್ಕ್ರೀನ್ ರೀಡರ್ ಗಳೆಂಬ ವಿಶಿಷ್ಟ ಬಗೆಯ ಸಾಫ್ಟ್ ವೇರ್ ಈ ತೊಂದರೆಗೆ ಪರಿಹಾರ ನೀಡುತ್ತದೆ.

ಏನಿದು ಸ್ಕ್ರೀನ್ ರೀಡರ್? : ಸ್ಕ್ರೀನ್ ರೀಡರ್‌ಗಳು ಎಂದರೆ ಇವು ಒಂದು ರೀತಿಯ ವಿಶೇಷ ತಂತ್ರಾಂಶಗಳು. ಈ ತಂತ್ರಾಂಶಗಳು ಕಂಪ್ಯೂಟರ್‌ನ ಪರದೆಯ ಮೇಲೆ ಬರುವ ಎಲ್ಲ ಪಠ್ಯಗಳನ್ನೂ "ಟೆಕ್ಸ್ಟ್ ಟು ಸ್ಪೀಚ್" ಎಂಬ ಮತ್ತೊಂದು ವಿಶೇಷ ತಂತ್ರಾಂಶದ ಸಹಾಯದಿಂದ ಮಾತಿನ ರೂಪಕ್ಕೆ ಬದಲಾಯಿಸುತ್ತವೆ. ಇದನ್ನು ಕೇಳಿಸಿಕೊಂಡು ಅಂಧರು ಸಾಮಾನ್ಯರಂತೆ ಕಂಪ್ಯೂಟರ್‌ನಲ್ಲಿ ಕೆಲಸವನ್ನು ಮಾಡಬಹುದಾಗಿದೆ. ಇದರ ಸಹಾಯದಿಂದಾಗಿ ಈಗ ಅಂದರು "ಐಟಿ" ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇಂತಹ ತಂತ್ರಾಂಶಗಳು ಆಂಗ್ಲ ಭಾಷೆಯಲ್ಲಿ ಈ ಮೊದಲೇ ಇತ್ತು. ಆದರೆ ಭಾರತೀಯ ಭಾಷೆಗಳಲ್ಲಿ ಇರಲಿಲ್ಲ.

ತಂತ್ರಜ್ಞಾನದಲ್ಲಿ ಇತ್ತೀಚೆಗೆ ಆದ ಶೀಘ್ರ ಬೆಳವಣಿಗೆಗಳಿಂದಾಗಿ ಭಾರತೀಯ ಭಾಷೆಗಳನ್ನೂ ಓದಬಲ್ಲ "ಟೀ.ಟೀ.ಎಸ್.(ಟೆಕ್ಸ್ಟ್ ಟು ಸ್ಪೀಚ್)ಗಳು ತಯಾರಾಗುತ್ತಿವೆ. ಅದರಲ್ಲಿ ಕನ್ನಡ ಓದಬಲ್ಲ ತಂತ್ರಾಂಶಗಳೂ ತಯಾರಾಗುತ್ತಿವೆ. ಈ ನಿಟ್ಟಿನಲ್ಲಿ ನೋಡಿದರೆ, "ಈಸ್ಪೀಕ್" ಎಂಬ ಒಂದು ವಿಶೇಷ ತಂತ್ರಾಂಶವು ಮುಂಚೂಣಿಯಲ್ಲಿ ನಿಲ್ಲುತ್ತದೆ. ಏಕೆಂದರೆ, ಈ ತಂತ್ರಾಂಶವು ತುಂಬಾ ಚಿಕ್ಕದಾಗಿದ್ದು ಪ್ರಪಂಚದ ಸುಮಾರು ನಲವತ್ತರಿಂದ ಐವತ್ತು ಭಾಷೆಗಳ ಪಠ್ಯವನ್ನು ಓದಬಲ್ಲದು. ಇದರಲ್ಲಿ, ನಾಲ್ಕೈದು ಭಾರತೀಯ ಭಾಷೆಗಳೂ ಸೇರಿವೆ; ಮತ್ತೂ ಎರಡರಿಂದ ಮೂರು ಭಾರತೀಯ ಭಾಷೆಗಳು ಸೇರುವುದರಲ್ಲಿವೆ. ಈಗ ಸೇರಿರುವ ಭಾರತೀಯ ಭಾಷೆಗಳೆಂದರೆ ಹಿಂದಿ, ಮರಾಠಿ, ತಮಿಳು. ಇದರಲ್ಲಿ ಕನ್ನಡ ಭಾಷೆಯೂ ಸೇರಿದ್ದು ಅದನ್ನು ಈಗ ಉತ್ತಮಪಡಿಸಲಾಗುತ್ತಿದೆ. ಇದು ಈಗ ಸುಮಾರು ಮುಗಿಯುವ ಹಂತದಲ್ಲಿ ಇದ್ದು, ಇದನ್ನು ಅನೇಕ ಅಂಧರು ತಮ್ಮ ಕಂಪ್ಯೂಟರುಗಳಲ್ಲಿ ಉಪಯೋಗಿಸುತ್ತಿದ್ದಾರೆ. ಇತ್ತೀಚೆಗೆ, ಇದರಲ್ಲಿ ತೆಲುಗು ಭಾಷೆಯನ್ನು ಸೇರಿಸಲಾಗುತ್ತಿದ್ದು, ಇದರ ಮೇಲೆ ಕೆಲಸ ನಡೆಯುತ್ತಿದೆ. ಗುಜರಾತಿ ಭಾಷೆಯನ್ನೂ ಸೇರಿಸುವ ಪ್ರಯತ್ನ ಈಗ ಆರಂಭವಾಗಿದೆ.

ಈಸ್ಪೀಕ್‌ನ ಚುಟುಕು ಇತಿಹಾಸ : ಈ ತಂತ್ರಾಂಶವನ್ನು ಇಂಗ್ಲೆಂಡ್ ದೇಶದ ಜೊನಾಥನ್ ಡಡ್ಡಿಂಗ್ಟನ್ ಎಂಬುವವರು ಸಿದ್ಧಪಡಿಸಿದ್ದಾರೆ. ಇದನ್ನು ಫೆಬ್ರವರಿ 2006ರಲ್ಲಿ ಬಿಡುಗಡೆಗೊಳಿಸಿದರು. ಈ ತಂತ್ರಾಂಶವು ಉಚಿತ ಹಾಗು ಓಪನ್ ಸೋರ್ಸ್ ತಂತ್ರಾಂಶವಾಗಿದೆ. ಇದನ್ನು "ವಿಂಡೋಸ್" ಮತ್ತು "ಲೈನಕ್ಸ್" ಹೊಂದಿರುವ ಕಂಪ್ಯೂಟರುಗಳಲ್ಲಿ ಬಳಸಬಹುದಾಗಿದೆ. ಸದ್ಯಕ್ಕೆ ಈ ತಂತ್ರಾಂಶವು ಪ್ರಪಂಚದ ಸುಮಾರು ನಲವತ್ತರಿಂದ ಐವತ್ತು ಭಾಷೆಗಳಲ್ಲಿ ಲಭ್ಯವಿದೆ. ಎಲ್ಲಾ ಭಾಷೆಗಳನ್ನೂ ಡಡ್ಡಿಂಗ್ಟನ್ ಅವರೇ ಸಿದ್ದಪಡಿಸುತ್ತಾರೆ. ಆದರೆ, ಅವರು ಈ ಕೆಲಸದಲ್ಲಿ ಆಯಾ ಭಾಷೆಗಳನ್ನು ಬಲ್ಲವರ ಸಹಾಯವನ್ನು ಪಡೆದುಕೊಳ್ಳುತ್ತಾರೆ.

ಶಿವಮೊಗ್ಗದ ಶ್ರೀಧರ್ ಸಾಧನೆ : ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶ್ರೀಧರ ಎಂಬ ಅಂಧ ಯುವಕನ ಸಂಪೂರ್ಣ ಸಹಕಾರದೊಂದಿಗೆ ಈಗ ಕನ್ನಡ ಭಾಷೆಯನ್ನೂ ಅಭಿವೃದ್ದಿಗೊಳಿಸಲಾಗಿದೆ. ಇನ್ನೂ ಉತ್ತಮಪಡಿಸುವ ಕೆಲಸ ಈಗಲು ನಡೆಯುತ್ತಿದೆ. ಇದರ ಪ್ರಯೋಜನವನ್ನು ಈಗಾಗಲೇ ಅನೇಕ ಅಂಧರು ಪಡೆದುಕೊಳ್ಳುತ್ತಿದ್ದಾರೆ. ಅವರು ಈಗ ಸುದ್ದಿಗಳನ್ನು ಹಾಗು ಇತರೆ ಸಾಮಾನ್ಯ ಜ್ಞಾನದ ವಿಚಾರವನ್ನು ಇದರ ಸಹಾಯದಿಂದಲೇ ನೇರವಾಗಿ ವೆಬ್‌ಸೈಟಿನಿಂದಲೇ ಇತರರ ಸಹಾಯವಿಲ್ಲದೇ ಓದುತ್ತಿದ್ದಾರೆ. ಇದಕ್ಕಾಗಿ http://espeak.sourceforge.net/test/latest.htmlಗೆ ಹೋಗಿ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.

ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಶ್ರೀಧರ್. ಟಿ.ಎಸ್. ಅವರನ್ನು ಸಂಪರ್ಕಿಸಬಹುದಾಗಿದೆ. ಇವರು ಸ್ವತಃ ಅಂಧರಾಗಿದ್ದು ಈಸ್ಪೀಕ್‌ನಲ್ಲಿ ಕನ್ನಡ ಭಾಷೆಯನ್ನು ಉತ್ತಮಗೊಳಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ದಿನ ನಿತ್ಯದ ಜೀವನದಲ್ಲಿ ಇದನ್ನು ಸುದ್ದಿ ಓದಲು, ತಮ್ಮ ಪದವಿ ಶಿಕ್ಷಣದ ಪಠ್ಯವನ್ನು ಓದಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದನ್ನು ತಮ್ಮ ಸ್ನೇಹಿತರುಗಳೊಂದಿಗೂ ಹಂಚಿಕೊಂಡು ಅವರ ಅಭಿಪ್ರಾಯಗಳ ಮೇಲೆ ಇದನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ನೀವು ಅವರನ್ನೇ ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ: 99809 89171. 
                                    ಅವರ ಈ-ಮೇಲ್ ವಿಳಾಸ: tss.abs@gmail.com.

Thursday, January 20, 2011

Raaga Top Ten

ಮೊಬೈಲ್ ನಂಬರ್ ಪೊರ್ಟೆಬಿಲಿಟಿ ಬಂತು ಡುಂ... ಡುಂ.....

ಇನ್ನು ಮುಂದೆ ಮೊಬೈಲ್ ಸೇವೆಗಳ ಬಳಕೆ ಹಿಂದಿಗಿಂತಲೂ ಬಿಂದಾಸ್ ಆಗಲಿದೆ. ಬಹುನಿರೀಕ್ಷಿತ ಮೊಬೈಲ್ ನಂಬರ್ ಪೊರ್ಟೆಬಿಲಿಟಿ (ಎಂ ಎನ್ ಪಿ) ಕೊನೆಗೂ ನಮ್ಮಲ್ಲಿಗೆ ಬಂದಿದೆ. ಇನ್ನು ಮುಂದೆ ಕೇವಲ 19 ರೂಪಾಯಿ ಖರ್ಚು ಮಾಡಿದರೆ ಸಾಕು. ಯಾವ ಕಂಪನಿಯ ಸಿಮ್ ಖರೀದಿಸಿದರೂ ಹಳೆಯ ನಂಬರ್ ಉಳಿಸಿಕೊಳ್ಳಬಹುದು. ಇದು ನನ್ನ ಹೊಸ ನಂಬರ್ ಸೇವ್ ಮಾಡಿಟ್ಟುಕೊಳ್ಳಿ ಅಂತ ಯಾರಿಗೂ ಸಂದೇಶ ಕಳುಹಿಸುವ ತೊಂದರೆಯೂ ಇಲ್ಲ. ನಿಮಗೆ ಇಷ್ಟವಾದ ಮೊಬೈಲ್ ಸೇವಾ ಕಂಪನಿಗೆ ಹಾರಬಹುದು. ಟ್ರಾಯ್(TRAI) ನಿಯಮಾವಳಿಗೆ ತಕ್ಕಂತೆ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಿರುವ ಐಡಿಯಾ ಸೆಲ್ಯೂಲರ್ ಸಂಸ್ಥೆ MNP ಅಳವಡಿಸುವಲ್ಲಿ ಸಫಲವಾಗಿದೆ.

ಹೆಚ್ಚಿನ ಮೊಬೈಲ್ ಸೇವಾದಾರ ಕಂಪನಿಗಳು ಜನವರಿ 20ರಿಂದ ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಈ ಸೇವೆಯನ್ನು ಆರಂಭಿಸಲಿವೆ. ಐಡಿಯಾ ಸೆಲ್ಯುಲಾರ್ ಇದರಲ್ಲಿ ಮುಂಚೂಣಿಯಲ್ಲಿದ್ದು ನಾಡಿದ್ದು ಅಂದರೆ 20ನೇ ತಾರೀಖಿನಿಂದ ದೇಶಾದ್ಯಂತ ಈ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ ದೇಶದ ಸುಮಾರು 700 ಮಿಲಿಯನ್ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗುವಂತೆ ಸಹಾಯವಾಣಿ ಟೂಲ್ ಫ್ರೀ ನಂಬರ್ 1800-270-0000 ಗೆ ಕರೆ ಮಾಡಬಹುದಾಗಿದೆ. ಐಡಿಯಾ, ವೊಡಾಫೋನ್ ನಂತಹ ಕಂಪನಿಗಳು ಈಗಾಗಲೇ ಎಂಎನ್ ಪಿ ಜಾಹೀರಾತು ಅಭಿಯಾನ ಆರಂಭಿಸಿವೆ.

ಏನಿದು ನಂಬರ್ ಪೊರ್ಟೆಬಿಲಿಟಿ?: ಸಿಂಪಲ್ ಆಗಿ ಹೇಳಬೇಕೆಂದರೆ ಹಳೆಯ ಮೊಬೈಲ್ ನಂಬರ್ ಉಳಿಸಿಕೊಂಡು ಹೊಸ ಮೊಬೈಲ್ ಕಂಪನಿಯ ಸೇವೆಯನ್ನು ಪಡೆಯುವುದು. ಅಂದರೆ ಈಗಿನ ಕಂಪನಿ ನೀಡುತ್ತಿರುವ ಸೇವೆ ನಿಮಗೆ ಇಷ್ಟವಾಗದೇ ಇದ್ದರೆ ಅದೇ ನಂಬರ್ ನ ಬೇರೊಂದು ಕಂಪನಿಯ ಸಿಮ್ ಖರೀದಿಸಬಹುದು.

ಈಗ ಮೊಬೈಲ್ ಸೇವಾದಾರ ಕಂಪನಿಗಳು ನೀಡುವ ಆಫರ್ ಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿವೆ. ಬೇರೊಂದು ಕಂಪನಿಯ ಆಫರ್ ನೋಡಿ ಛೇ ಆ ಸಿಮ್ ನನ್ನಲ್ಲಿರುತ್ತಿದ್ದರೆ? ಎಂಬ ಬಯಕೆ ನಿಮಗಿರಬಹುದು. ಅಥವಾ ಇಂತಹ ಆಫರ್ ಗಳಿಂದಾಗಿ ನೀವು ಹಲವು ಸಿಮ್ ಗಳ ಒಡೆಯರಾಗಿರಬಹುದು. ಇನ್ನು ಮುಂದೆ ಹಳೆಯ ನಂಬರ್ ಉಳಿಸಿಕೊಂಡೇ ನಿಮಗಿಷ್ಟವಾದ ಯಾವುದೇ ಕಂಪನಿಯ ಸಿಮ್ ಖರೀದಿಸಬಹುದು.

ಕೇವಲ 19 ರೂಪಾಯಿ ವೆಚ್ಚ: ಸಿಮ್ ಬದಲಾಯಿಸಿದರೂ ಹಳೆಯ ನಂಬರ್ ಉಳಿಸಿಕೊಳ್ಳಲು ಕೇವಲ 19 ರೂಪಾಯಿ ಖರ್ಚು ಮಾಡಿದರೆ ಸಾಕು. ಈ ಸೇವೆಯನ್ನು ಪಡೆಯಬಯಸುವವರು PORT ಅಂತ ಮೊಬೈಲ್ ನಲ್ಲಿ ಕೀ ಮಾಡಿ ಅದರ ಮುಂದೆ ಮೊಬೈಲ್ ಸಂಖ್ಯೆ ಹಾಕಿ 1900 ನಂಬರ್ ಗೆ ಸಂದೇಶ ಕಳಿಸಿದರೆ ಸಾಕು. ಅಲ್ಲಿಂದ ಯೂನಿಕ್ಯೂ ಪೊರ್ಟಿಂಗ್ ಕೊಡ್(ಯುಪಿಸಿ) ನಿಮ್ಮ ಮೊಬೈಲ್ ಗೆ ಬರುತ್ತದೆ. ಈ ಎಸ್ಎಂಎಸ್ ನ್ನು ನಿಮ್ಮ ಹಿಂದಿನ ಮೊಬೈಲ್ ಸೇವಾ ಕಂಪನಿಗೆ ಕಳುಹಿಸಬೇಕಾಗುತ್ತದೆ. ಅಥವಾ ನೀವು ಹಿಂದಿನ ಕಂಪನಿ ನೀಡುವ ಫಾರ್ಮ್ ತುಂಬಿಸಿ ಯುಪಿಸಿ ಕೋಡ್ ಪಡೆಯಬಹುದು. ಆದರೆ ಈ ಪ್ರಕ್ರಿಯೆಗೆ ಸುಮಾರು ಒಂದು ವಾರ ಬೇಕಾಗುತ್ತದೆ. ಅದಕ್ಕಿಂತ ಎಸ್ಎಂಎಸ್ ಕಳುಹಿಸುವುದು ಉತ್ತಮ.

ಪೊರ್ಟೆಬಿಲಿಟಿ ಆರಂಭವಾದ ನಂತರ ಹೀಗೆ ಮಾಡಿ
* PORT ಅಂತ ಟೈಪ್ ಮಾಡಿ ಅದರ ಮುಂದೆ ನಿಮ್ಮ ಮೊಬೈಲ್ ಸಂಖೈ ಬರೆದು 1900ಕ್ಕೆ ಕಳಿಸಿ. ನಿಮಗೆ ಅಲ್ಲಿಂದ ಯೂನಿಕ್ಯೂ ಪೊರ್ಟಿಂಗ್ ನಂಬರ್ ಎಸ್ ಎಂ ಎಸ್ ಮೂಲಕ ದೊರಕುತ್ತದೆ.
* ಅಲ್ಲಿ ದೊರಕಿದ ಯೂನಿಕ್ಯೂ ಪೊರ್ಟಿಂಗ್ ನಂಬರ್ ನ್ನು ನಿಮ್ಮ ಹಿಂದಿನ ಮೊಬೈಲ್ ಸೇವಾ ಕಂಪನಿಗೆ ಎಸ್ ಎಂ ಎಸ್ ಮಾಡಿ.
* ಹಳೆಯ ಕಂಪನಿ ನಿಮ್ಮ ದಾಖಲೆ ಪರಿಶೀಲಿಸಿ ಯಾವುದೇ ಬಾಕಿ ಇಲ್ಲವೆಂದು ಪರಿಶೀಲಿಸುತ್ತದೆ. ಎಲ್ಲ ಚುಕ್ತಾ ಮಾಡಿದ ಮೇಲೆ ಬೇರೆ ಸೇವಾದಾರಲ್ಲಿಗೆ ಹೋಗಲು ಅವಕಾಶ ನೀಡುತ್ತದೆ.
* ಹೊಸ ಮೊಬೈಲ್ ಸೇವಾದಾರ ಕಂಪನಿ ನಿಮಗೆ ಎಸ್ಎಂಎಸ್ ಕಳುಹಿಸಿ ಕೊಡುತ್ತದೆ. ನಂತರದ ನಾಲ್ಕು ದಿನಗಳೊಳಗೆ ಈ ಸೇವೆ ನಿಮಗೆ ದೊರಕಬಹುದು.
* ನಿಮ್ಮ ಹಳೆಯ ಸಿಮ್ ಡೆಡ್ ಆದ ಎರಡು ಗಂಟೆಯ ನಂತರ ಸುಮಾರು 19 ರೂಪಾಯಿ ಮತ್ತು ಸೂಕ್ತ ದಾಖಲೆ ನೀಡಿ ಹೊಸ ಕಂಪನಿಯಿಂದ ಸೇವೆ ಪಡೆದುಕೊಳ್ಳಬಹುದು.
(ಮುಂದಿನ ದಿನಗಳಲ್ಲಿ ಈ ಸೇವೆ ಪಡೆಯುವುದು ಇನ್ನಷ್ಟು ಸುಲಭವಾಗಬಹುದು)

Friday, January 14, 2011

ವಿಕಿಪೀಡಿಯ 10 ನೇ ಹುಟ್ಟುಹಬ್ಬ

ಮುಕ್ತ ವಿಶ್ವಕೋಶ ವಿಕಿಪೀಡಿಯದ ಹತ್ತನೇ ವಾರ್ಷಿಕೋತ್ಸವ ಸಂಭ್ರಮ.
ಭಾರತದಲ್ಲಿ ವಿಕಿಪೀಡಿಯದ ಕ್ರಿಯಾಶೀಲ ಕೇಂದ್ರ ಎನಿಸಿರುವ ಬೆಂಗಳೂರು ವಿಕಿ ತಂಡ, ಜ.15ರಂದು ಸಂಪೂರ್ಣವಾಗಿ ವಿಕಿ 10ರ ಸಂಭ್ರಮಕ್ಕೆ ಮೀಸಲಿರಿಸಿದೆ. ಈ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದೆ.

ವಿಕಿ ಫೌಂಡೇಷನ್ ನ ಅಧಿಕಾರಿಗಳು, ಅತಿಥಿ ವಾಚಕರು ಸೇರಿದಂತೆ ಹಲವರಿಂದ ಉಪಯುಕ್ತ ಮಾಹಿತಿ ಸಿಗಲಿದೆ. ವಿಕಿಮೀಡಿಯಾದ ಮುಂದಿನ ಯೋಜನೆಗಳು, ಜ್ಞಾನ ಸೃಷ್ಟಿ ಹಾಗೂ ಹಂಚಿಕೆಯಲ್ಲಿನ ತೊಡಕುಗಳು, ಲಾಭಗಳು ಮುಂತಾದವುಗಳ ವಿವರ ಕೂಡಾ ಸಿಗುತ್ತದೆ.

ಸ್ಥಳ: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್
ಬೆಂಗಳೂರು 560012.

ಬೆಳಗ್ಗೆ 9 ರಿಂದ 4.30ರ ವರೆಗಿನ ಸಮಯವನ್ನು ವಿಕಿಪೀಡಿಯನ್ ಗಳಿಗೆ ಮೀಸಲಿಡಲಾಗಿದ್ದು, 5 ಗಂಟೆ ನಂತರ ಸಾರ್ವಜನಿಕರಿಗೆ ಕಾರ್ಯಕ್ರಮವಿರುತ್ತದೆ.

2010ರ ವಿಕಿಪೀಡಿಯ ವಿಶ್ವಕೋಶದಲ್ಲಿ ವಿವಿಧ ಭಾಷೆಗಳ ಮಾಹಿತಿ ಕಣಜದಲ್ಲಿರುವ ಲೇಖನಗಳ ಸಂಖ್ಯೆಗಳು ಇಂತಿವೆ:
* ಗುಜರಾತ್ : 15,000 ಲೇಖನಗಳು
* ಮರಾಠಿ : 30,000 ಲೇಖನಗಳು
* ಉರ್ದು : 15,000 ಲೇಖನಗಳು
* ಮಲೆಯಾಳಂ : 15,000 ಲೇಖನಗಳು
* ಮಲೆಯಾಳಂ ವಿಕ್ಷನರಿ: 60,000 ಪದಗಳು
* ತಮಿಳು : 25,000 ಲೇಖನಗಳು
* ತಮಿಳು ವಿಕ್ಷನರಿ : 1,90,000+ ಪದಗಳು

ಈ ಪಟ್ಟಿಯಲ್ಲಿ ಕನ್ನಡ ಏಕೆ ಸೇರಿಲ್ಲ? ಕಾರಣ ಇಷ್ಟೇ ವಿಕಿಪೀಡಿಯದಲ್ಲಿ ಕನ್ನಡ ಲೇಖನಗಳ ಸಂಖ್ಯೆ ಇನ್ನೂ 10,000 ಕೂಡಾ ದಾಟಿಲ್ಲ. ಐಟಿ ಉದ್ಯಮದಲ್ಲಿರುವ ಕನ್ನಡಿಗರಿಗೆ ಇನ್ನೂ ವಿಕಿಪೀಡಿಯ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇನ್ನು ಉತ್ಸಾಹಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಸಿಗುವುದೇ ಕಷ್ಟ. ವಿಕಿಪೀಡಿಯ ಸಾರ್ವಜನಿಕರಿಗಾಗಿ ಇರುವ ಮುಕ್ತ ವಿಶ್ವಕೋಶವಾಗಿದ್ದು, ಹೆಚ್ಚೆಚ್ಚು ಲೇಖನಗಳನ್ನು ತುಂಬಿಸುವ ಮೂಲಕ ಕನ್ನಡ ಸೇವೆ ಮಾಡುವ ಅವಕಾಶವುಂಟು. ವಿಕಿಪೀಡಿಯಾಗೆ ಲೇಖನ ಸೇರಿಸುವುದು ಹೇಗೆ ಹಾಗೂ ಏಕೆ? ಎಂಬ ಪ್ರಶ್ನೆಗಳಿದ್ದರೆ ಜ.15ರ ವಿಕಿಪೀಡಿಯ 10 ರ ಸಂಭ್ರಮದಲ್ಲಿ ಪಾಲ್ಗೊಂಡು ಚರ್ಚಿಸಿ.

ವಿಕಿಪೀಡಿಯ ಬಗ್ಗೆ :ವಿಕಿಮೀಡಿಯಾ ಫೌಂಡೇಶನ್‌ನ ಸಹಾಯದಿಂದ ನಡೆಯುತ್ತಿರುವ ವಿಕಿಪೀಡಿಯ ಒಂದು ಮುಕ್ತ ಸಹಯೋಗಿ ಬಹುಭಾಷಾ ವಿಶ್ವಕೋಶ. ಸುಮಾರು 17 ಮಿಲಿಯ ಲೇಖನಗಳು ಇದರಲ್ಲಿವೆ. ಇಂಗ್ಲಿಶ್ ಭಾಷೆ ಒಂದರಲ್ಲೇ ಸುಮಾರು 3.5 ಮಿಲಿಯ ಲೇಖನಗಳಿವೆ.

ಈ ಎಲ್ಲ ಲೇಖನಗಳನ್ನು ಪ್ರಪಂಚಾದ್ಯಂತ ಚೆದುರಿಹೋಗಿರುವ ಸ್ವಯಂಸೇವಕರು ಬರೆದಿರುವುದು ಮಾತ್ರವಲ್ಲ ಈ ಲೇಖನಗಳನ್ನು ಯಾರು ಬೇಕಾದರು ತಿದ್ದಬಹುದು ಮತ್ತು ನವೀಕರಿಸಬಹುದು. ವಿಕಿಪೀಡಿಯವನ್ನು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸಾಂಗರ್ ಅವರುಗಳು 2001 ರಲ್ಲಿ ಪ್ರಾರಂಭಿಸಿದರು. ಈಗ ಇದು ಅಂತರಜಾಲದ ಎಲ್ಲ ತಾಣಗಳಲ್ಲಿ ಜನಬಳಕೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ. ಅಂತರಜಾಲದಲ್ಲಿರುವ ಮಾಹಿತಿ ಆಕರವಾಗಿ ಇದು ಪ್ರಥಮ ಸ್ಥಾನದಲ್ಲಿದೆ.

Thursday, January 13, 2011

ನೀರಿನಿಂದ ಓಡುವ ಕಾರು: ಯುವ ವಿಜ್ಞಾನಿಯಿಂದ ಸಾಧನೆ

 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಈ ದಿನಗಳಲ್ಲಿ, ನೀರು ಬಳಸಿ ಕಾರು, ಬೈಕು ಓಡಿಸುವಂತಾದರೆ ಹೇಗಿರುತ್ತೆ? ಒಮ್ಮೆ ಊಹಿಸಿನೋಡಿ. ವಿಶ್ವವೇ ಪೆಟ್ರೋಲ್‌ಗೆ ಬದಲಿ ಇಂಧನವನ್ನು ಕಂಡುಹಿಡಿಯಲು ಹೆಣಗಾಡುತ್ತಿರುವಾಗ ಇತ್ತ ನಮ್ಮ ಯುವ ವಿಜ್ಞಾನಿ ಆ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.
ನೀರಿನಲ್ಲಿರುವ ಜಲಜನಕದ ಅಂಶವನ್ನು ವಾಹನಗಳ ಇಂಧನವನ್ನಾಗಿ ಪರಿವರ್ತಿಸಿ, ಅದರಿಂದ 350 ಸಿಸಿ ಮೊಟಾರು ಬೈಕನ್ನು ಸುಮಾರು ಒಂದು ಗಂಟೆ ಕಾಲ ಚಲಾಯಿಸಬಲ್ಲ ಸಂಶೋಧನೆ ನಡೆಸಿರುವ ಯುವ ವಿಜ್ಞಾನಿ ಗೋವಿಂದ ಮಾಳವೀಯ, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಟಾಟಾ ಕಾರುಗಳ ಒಡೆಯ, ಉದ್ಯಮಿ ರತನ್ ಟಾಟಾ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಸುಮಾರು ಒಂದೂವರೆ ದಶಕದ ಕಠಿಣ ಪರಿಶ್ರಮದಿಂದ ತಾನು ಈ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ತಮ್ಮ ಸಂಸ್ಥೆಯಿಂದ ಜಲ-ಆಧಾರಿತ ಕಾರುಗಳ ತಯಾರಿಕೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ತನ್ನನ್ನೂ ಸೇರಿಸಿಕೊಳ್ಳುವಂತೆ ಮಾಳವೀಯ ಕೇಳಿಕೊಂಡಿದ್ದಾರೆ.
ಸೂಕ್ತ ಮೂಲಸೌಕರ್ಯ ಮತ್ತು ಅವಕಾಶ ಒದಗಿಸಿಕೊಟ್ಟರೆ, ನೀರಿನಿಂದ ಓಡುವ ಕಾರಿನ ಎಂಜಿನ್ ತಯಾರಿಸಬಲ್ಲೆ ಎಂದು 12 ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದಿರುವ ಮಾಳವೀಯ ದೃಢವಾಗಿ ಹೇಳಿದ್ದಾರೆ.
ಒಂದು ಕೆಜಿ ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) ಮತ್ತು ಎರಡು ಕೆಜಿ ಅಲ್ಯುಮಿನಿಯಂ ಚೂರನ್ನು ನೀರಿನೊಂದಿಗೆ ಬೆರೆಸಿ, ಆ ಮೂಲಕ ಉತ್ಪತ್ತಿಯಾದ ಜಲಜನಕವನ್ನು ಉಪಯೋಗಿಸಿಕೊಂಡು ಪ್ರಸ್ತುತ ಬೈಕ್ ಓಡಿಸುತ್ತಿರುವುದಾಗಿ ತನ್ನ ಪತ್ರದಲ್ಲಿ ತಿಳಿಸಿರುವ ಅವರು, ಜಲಜನಕದಲ್ಲಿರುವ ದಹನಶೀಲತೆಯಿಂದಾಗಿ ಸ್ಫೋಟವಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ನೀರು ಚಾಲಿತ ಕಾರಿನ ಸಂಶೋಧನೆಗೆ ಅಧಿಕ ಹಣ ವಿನಿಯೋಗಿಸುವುದಾಗಿ ಇತ್ತೀಚೆಗೆ ಟಾಟಾ ಪ್ರಕಟಿಸಿತ್ತು.

Friday, January 7, 2011

ಈಗೇನಿದ್ದರೂ ಬ್ಲಾಗ್, ಟ್ವಿಟರ್, ಫೇಸ್ ಬುಕ್, ಆರ್ಕುಟ್ ಕಾಲ

 

ಹೊಸ ವರ್ಷದ ಹೊತ್ತಿಗೆ ಹೊಸದೊಂದು ಡೈರಿ ತಂದು ಬರೆಯಲು ಶುರುಮಾಡುವ ಮೂಡ್ ಬಹುತೇಕರಿಗೆ ಇಲ್ಲ. ಇದಕ್ಕೆ ಬದಲಾಗಿ ಎಲ್ಲರಿಗೂ ಈಗ ಸಿಕ್ಕಿದೆ ಇ-ಡೈರಿ.
ಟ್ವಿಟರ್… ಫೇಸ್ ಬುಕ್… ಆರ್ಕುಟ್…
ಇದು ಆಧುನಿಕ ಸಂಪರ್ಕ ಸಾಧನಗಳು . ವ್ಯಕ್ತಿ ವ್ಯಕ್ತಿಗೆ ಕೊಂಡಿ ಕಲ್ಪಿಸುವ ಹಾಗೆಯೇ ವೈಯಕ್ತಿಕ ಒಳತೋಟಿಗಳನ್ನು ಹೊರಹಾಕುವ ಮಾಧ್ಯಮಗಳೂ ಆಗುತ್ತಿವೆ. ಒಂದರ್ಥದಲ್ಲಿ ಬ್ಲಾಗ್, ಫೇಸ್ ಬುಕ್ ಮೊದಲಾದ ಈ ಎಲ್ಲಾ ಮಾಧ್ಯಮಗಳು ‘ಆನ್ ಲೈನ್ ಡೈರಿ’ಯಂತೆ ಬಳಕೆಯಾಗುತ್ತಿವೆ.
ಹಿಂದೆಲ್ಲ ಹೊಸವರ್ಷ ಬಂದಾಕ್ಷಣ ಹೊಸ ಡೈರಿ ಕೊಂಡು ತಂದು ಅದರಲ್ಲಿ ಒಪ್ಪವಾಗಿ ಡೈರಿ ಬರೆಯುವುದಕ್ಕೆ ಶುರು ಮಾಡುತ್ತಿದ್ದವರು ಬಹಳ ಮಂದಿ. ಆದರ ಇಂದು ಹೀಗಿಲ್ಲ. ಮನೆಗೆ ಬಂದ ಮೇಲೆ ರಾತ್ರಿಯ ಹೊತ್ತು ಡೈರಿ ಹೊರತೆಗೆದು ಅದರಲ್ಲಿ ಚೆಂದದ ಅಕ್ಷರಗಳಿಂದ ಇಡೀ ದಿನದ ಅನುಭವಗಳನ್ನೆಲ್ಲ ಬರೆಯುವ ಪುರುಸೊತ್ತಾಗಲೀ, ವ್ಯವಧಾನವಾಗಲೀ ಯಾರಿಗೂ ಇಲ್ಲ. ಇಂಟರ್ನೆಟ್ ತೆರೆದು ಬ್ಲಾಗ್ ನಲ್ಲೋ, ಫೇಸ್ ಬುಕ್ ನಲ್ಲೋ ಟೈಪಿಸಿದರಾಯಿತು. ಅಳಿಸಿ ಹೋಗುತ್ತದೆಂಬ ಭಯವಿಲ್ಲ. ಪುಸ್ತಕ ಕಳೆದು ಹೋಗುವ ಹಿಂಜರಿಕೆಯೂ ಇಲ್ಲ.
ಬ್ಲಾಗ್ ಡೈರಿ
ದಿನಚರಿ ಪುಸ್ತಕವೇ ಆನ್ ಲೈನ್ ರೂಪದಲ್ಲಿ ಬಂದಂತಿರುವುದು ಬ್ಲಾಗ್ ಗಳಲ್ಲಿ. ಡೈರಿಗಳಲ್ಲಿ ಬರೆಯುವಂತೆ ಇಲ್ಲಿಯೂ ಸುದೀರ್ಘ ಬರಹಗಳನ್ನು ಬರೆಯುವವರೆಷ್ಟೋ ಜನ. ನಿತ್ಯದ ಬದುಕಿನಲ್ಲಿ ತಾವು ಕಂಡ ವಿಶಿಷ್ಟ ಘಟನೆ, ವಸ್ತು, ವಿಚಾರಗಳು, ಹೊಸ ಹೊಳಹುಗಳು, ಮನಸ್ಸಿನ ಒಳತೋಟಿ ಎಲ್ಲವೂ ಇಲ್ಲಿ ಬರಹ ರೂಪದಲ್ಲಿ ಮೂಡಿ ಬರುತ್ತದೆ. ಇತರರು ಓದುತ್ತಾರೆ ಎಂದು ಎಚ್ಚರದಿಂದ ಬರೆದವರು ಕೆಲವರಾದರೆ ತಮ್ಮ ಮನದಲ್ಲಿ ಮೂಡಿದ್ದೆಲ್ಲವನ್ನೂ ದಾಖಲಿಸುತ್ತಾ ಹೋಗುವವರು ಇನ್ನು ಕೆಲವರು. ಇದೀಗ ಜರ್ಮನಿಯಲ್ಲಿರುವ ಕನ್ನಡ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಈ ರೀತಿ ಬ್ಲಾಗಿಸುವವರಲ್ಲಿ ಒಬ್ಬರು. ಜರ್ಮನಿಗೆ ತೆರಳಿದ ಮೇಲಿಂದ ನಿಯಮಿತವಾಗಿ ಇಲ್ಲಿ ಬರೆಯುತ್ತಲೇ ಹೋಗಿದ್ದಾರೆ ಅವರು. ತಮ್ಮ ತಾಯಿಯವರು ತೀರಿಕೊಂಡ ಸಂದರ್ಭ ಮತ್ತು ಮಂಗಳೂರಿನ ವಿಮಾನ ದುರಂತದ ವೇಳೆ ತಮ್ಮ ಮನಸಿಗಾದ ನೋವನ್ನು ಬ್ಲಾಗ್ ನಲ್ಲಿ ದಾಖಲಿಸಿಕೊಂಡದ್ದು ಹೀಗೆ: ‘ಕಳೆದ ಒಂದು ವಾರದಿಂದ ನೋವು ಗಾಢವಾಗಿ ಆವರಿಸಿದೆ. ಮನಸ್ಸು ಎಲ್ಲ ಆಸಕ್ತಿಗಳನ್ನೂ ನಿರಾಕರಿಸಿದೆ. ದೈನಂದಿನ ಯಾವುದೇ ಚಟುವಟಿಕೆಗಳೂ ನಿಂತಿಲ್ಲ. ಆದರೆ ಅವು ಯಾವುದನ್ನೂ ಇಂದ್ರಿಯಗಳು ಸುಖಿಸುತ್ತಿಲ್ಲ. ಕಾತರ, ತಲ್ಲಣ, ಕುತೂಹಲ, ಬೆರಗು, ತೃಪ್ತಿ, ಸಿಟ್ಟು, ಯಾವುದೂ ಅಲ್ಲಿ ಇಲ್ಲ. ಚೇತನ ಜಡವಾಗಿದೆ. ಮನಸ್ಸು ವಿಷಣ್ಣವಾಗಿದೆ…’
ಇದೇ ರೀತಿ ತಮ್ಮ ಬ್ಲಾಗ್ ಗಳಲ್ಲಿ ತಮ್ಮ ಅಂತರಂಗದ ಮಾತುಗಳನ್ನು ದಾಖಲಿಸುತ್ತಿರುವವರು ಅದೆಷ್ಟೋ ಜನ.
ಕೆಲವರು ತಮ್ಮ ಪ್ರವಾಸದ ಸಂದರ್ಭದ ಅನುಭವಗಳನ್ನು ‘ಅಲೆಮಾರಿಯ ಅನುಭವಗಳು’ ಬ್ಲಾಗ್ ನಲ್ಲಿ ದಾಖಲಿಸಿದರೆ, ಪತ್ರಕರ್ತ ಶ್ರೀನಿವಾಸ ಗೌಡ ತಮ್ಮ ಬ್ಲಾಗ್ಗೆ ಇಟ್ಟಿರುವ ಹೆಸರೇ ‘ಖಾಸಗಿ ಡೈರಿ’ ಬದುಕಿನಂಗಳದಲ್ಲಿ ಕಂಡ ವಿಶಿಷ್ಟ ವ್ಯಕ್ತಿ , ಅನೂಹ್ಯ ಸಂಗತಿಗಳನ್ನು ಶಶಿಧರ ಭಟ್ರ ‘ಕುಮ್ರಿ’ ಬ್ಲಾಗ್ ದಾಖಲಿಸುತ್ತಾ ಹೋಗಿದ್ದರೆ ಬ್ಲಾಗಿಗರ ಬಾಳ ಹಾದಿಗೊಂದು ಕನ್ನಡಿಯಂತೆ ಮೂಡಿರುವುದು ‘ಓ ನನ್ನ ಚೇತನಾ’ ಬ್ಲಾಗ್. ನೋಡಿದ ಚಿತ್ರದ ಬಗೆಗಿನ ಅಭಿಪ್ರಾಯದಿಂದ ಹಿಡಿದು ಅಮೆರಿಕದ ಊರು, ಅನುಭವಗಳನ್ನು ಬರಹ, ಫೋಟೊಗಳಲ್ಲಿ ಸೆರೆಹಿಡಿಯುವ ಕ್ಯಾಲಿಫೋರ್ನಿಯಾದ ಹೇಮಶ್ರೀ ಅವರ ‘ಸ್ಮೈಲಿಂಗ್ ಕಲರ್ಸ್, ಎಲ್ಲೋ ಅಪರೂಪಕ್ಕೊಮ್ಮೆ ಬರಗಳನ್ನು ದಾಖಲಿಸುವ ರಾಧಿಕಾರ ‘ಮಧುಬನದಿ ರಾಧಿಕೆ’ ಒಂದೆಡೆ ಲಹರಿಯಂತೆ ಇನ್ನೊಂದೆಡೆ ಮನದ ಮಾತಿನಂತೆ ಬರೆಯುತ್ತ ಹೋಗುವ ‘ಕೆನೆ ಕಾಫಿ’, ಕನ್ನಡ- ಇಂಗ್ಲಿಷ್ ಭಾಷೆಗಳೆರಡರಲ್ಲೂ ಬ್ಲಾಗಿಗನ ಒಳಗನ್ನು ತೆರೆದಿಡುವ ‘ಅಂತರಂಗದ ಅಲೆಗಳು’ ಹೀಗೆ ಹುಡುಕುತ್ತ ಹೋದಷ್ಟೂ ವೈವಿಧ್ಯಮಯ ಬ್ಲಾಗ್ಗಳ ಸಾಲೇ ತೆರೆದುಕೊಳ್ಳುತ್ತದೆ.
ಗಂಭೀರ ಲೇಖನಗಳನ್ನು ಬರೆಯುವುದಕ್ಕೆ ಒಂದು ಬ್ಲಾಗ್, ಖಾಸಗಿ ವಿಚಾರಗಳನ್ನು ಬರೆಯುವುದಕ್ಕೆ ಇನ್ನೊಂದು-ಹೀಗೆ ಬಗೆಬಗೆಯ ಬ್ಲಾಗ್ಗಳನ್ನು ಮಾಡಿಕೊಂಡವರೂ ಅನೇಕರಿದ್ದಾರೆ.
ಶಾರ್ಟ್ ಅಂಡ್ ಸ್ವೀಟ್
ಬ್ಲಾಗ್ ಗಳಲ್ಲಿ ಕಾಣಿಸುವುದು ದೀರ್ಘ ಬರವಣಿಗೆಗಳಾದರೆ ಫೆಸ್ಬುಕ್, ಟ್ವಿಟರ್, ಆರ್ಕುಟ್ಗಳಲ್ಲಿ ಶಾರ್ಟ್ ಅಂಡ್ ಸ್ವೀಟ್ ಡೈರಿ ಬರಗಳು. ತಕ್ಷಣಕ್ಕೆ ಹೊಳೆದ ವಿಷಯವನ್ನು ಹೊಸ ವಿಚಾರಗಳನ್ನು ಇಲ್ಲಿ ಬರೆದು ಚರ್ಚೆಗೆ ಇತರರನ್ನು ಆಹ್ವಾನಿಸುವವರೂ ಉಮಟು. ಬೇರಾವುದೋ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿಕೊಂಡು ತನ್ನ ಭಾವನೆಗಳನ್ನ ದಾಖಲಿಸುತ್ತ ಹೋಗುವವರೂ ಇಲ್ಲಿದ್ದಾರೆ. ಏನೇ ಇದ್ದರೂ ಇಲ್ಲಿ ದೀರ್ಘ ಬರಹಗಳಿಲ್ಲ. ಆ ಕ್ಷಣಕ್ಕೆ ಹೊಳೆದ ಮಾತುಗಳನ್ನು ಕೆಲವೇ ಶಬ್ದಗಳಿಂದ ಹಿಡಿದು ಒಂದೆರಡು ವಾಕ್ಯಗಳಲ್ಲಿ ತಕ್ಷಣ ದಾಖಲಿಸುವುದಕ್ಕೆ ಇವು ಪೂರಕ. ಫೇಸ್ ಬುಕ್ ಅಂತೂ ಈ ನಿಟ್ಟಿನಲ್ಲಿ ತುಂಬಾ ಜನಪ್ರಿಯ.
ದೃಶ್ಯರೂಪ
ಈ ಆನ್ ಲೈನ್ ಮಾಧ್ಯಮಗಳೆಲ್ಲಾ ದಿನಚರಿಯ ದೃಶ್ಯರೂಪಗಳಾಗಿರುವುದು ಇನ್ನೊಂದು ವಿಶೇಷ. ಬ್ಲಾಗ್, ಫೇಸ್ಬುಕ್, ಅರ್ಕುಟ್ ಗಳೆಲ್ಲಲ್ಲ ತಮ್ಮ ಕುಟುಂಬಸ್ಥರ ಫೋಟೊಗಳು, ಪ್ರವಾಸದ ಸಂದರ್ಭದ ಚಿತ್ರಗಳು, ಇವೆಲ್ಲವನ್ನೂ ಅಪ್ಲೋಡ್ ಮಾಡುವವರು ಅದೆಷ್ಟೋ ಮಂದಿ. ತಮ್ಮ ಊರನ್ನು ಬಿಟ್ಟು ಪರ ಊರು, ವಿದೇಶಗಳೆಂದು ಹೊರ ಹೋದವರಿಗಂತೂ ಅಲ್ಲಿನ ತಮ್ಮ ಅನುಭವಗಳನ್ನು ತಾವು ಕಂಡ ದೃಶ್ಯಗಳನ್ನು ಶಾಶ್ವತವಾಗಿ ದಾಖಲಿಸುವುದಕ್ಕೆ ಇದಕ್ಕೀಂತ ಅತ್ಯುತ್ತಮ ಮಾಧ್ಯಮ ಬೇರಿಲ್ಲ. ಹಲವರು ತಮ್ಮ ಕಂದಮ್ಮಗಳ ಏಳು-ಬೀಳು , ಹೆಜ್ಜೆ ಇಡುವಿಕೆ ಹೀಗೆ ಮಗುವಿನ ಪ್ರತಿ ಹಂತದ ಬೆಳವಣಿಗೆಯನ್ನೂ ಫೋಟೊಗಳ ಮೂಲಕ ಇಲ್ಲಿ ಶಾಶ್ವತಗೊಳಿಸುವುದುಂಟು. ಫೋಟಗಳಮೂಲಕ ನೆನಪುಗಳನ್ನು ದಾಖಲಿಸುವುದಕ್ಕೆಂದೇ ರೂಪಿತವಾದ ಹಲವು ಬ್ಲಾಗ್ ಗಳೂ ಇವೆ .

Thursday, January 6, 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ


ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.

ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಃಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು. ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ, ಆತ್ಮಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು... ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನವಿರಬೇಕು ಅಷ್ಟೆ.

ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು. ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ. ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.

ಇವರು ಸ್ನೇಹಜೀವಿಗಳು. ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು. ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್. ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ, ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಕಚಗುಳಿಯಿಡುವ ಕೀಟಲೆ, ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.

ಇಲ್ಲೂ ಧರ್ಮರಕ್ಷಣೆಯ ಮಣಭಾರ ಹೊತ್ತವರಿದ್ದಾರೆ, ಜಾತಿ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಆಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ. ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದನ್ನು ಮೆಚ್ಚುಗೆಯಿರುತ್ತದೆ, ತಪ್ಪು ಕಂಡರೆ ಎಗ್ಗಿಲ್ಲದ ಟೀಕೆಯಿರುತ್ತದೆ. ಒಮ್ಮೆಮ್ಮೆ ತೀರಾ ಆಕ್ರೋಶ ಬಂದಾಗ ಇವರು ಅಮೀರ್‌ಖಾನನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.

ಇವರು ಬ್ಲಾಗರ್‌ಗಳು. ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು. ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ, ಟಿಎಸ್‌ಆರ್ ಹೆಸರಿನಲ್ಲಿ, ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರೂ ಅವಾರ್ಡು ಕೊಡುವುದಿಲ್ಲ. ರಿಪೋರ್ಟರ‍್ಸ್ ಗಿಲ್ಡಿನಲ್ಲಿ, ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್ ಕ್ಲಬ್‌ನಲ್ಲಿ ಮೆಂಬರ್‌ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ, ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ, ತಾವು ಬರೆದದ್ದನ್ನು ಓದಿದ್ದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ, ಇನ್ನು ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.

ಕೆಲವರು ಬ್ಲಾಗರ್‌ಗಳನ್ನು ಸುಖಾಸುಮ್ಮನೆ ಬೈಯುತ್ತಾರೆ. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟ ನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.

ಪತ್ರಕರ್ತರಲ್ಲದಿದ್ದರೂ ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು. ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು. ನಿಜ, ಇವರು ಕ್ರಾಂತಿಯನ್ನೇನು ಮಾಡಲಾರರು. ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು. ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

(ಇಷ್ಟವಾದರೆ ಈ ಪೋಸ್ಟನ್ನು ಬ್ಲಾಗರ್‌ಗಳು ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಬಳಸಿಕೊಳ್ಳಲು ಅನುಮತಿಯುಂಟು!)