WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, January 7, 2011

ಈಗೇನಿದ್ದರೂ ಬ್ಲಾಗ್, ಟ್ವಿಟರ್, ಫೇಸ್ ಬುಕ್, ಆರ್ಕುಟ್ ಕಾಲ

 

ಹೊಸ ವರ್ಷದ ಹೊತ್ತಿಗೆ ಹೊಸದೊಂದು ಡೈರಿ ತಂದು ಬರೆಯಲು ಶುರುಮಾಡುವ ಮೂಡ್ ಬಹುತೇಕರಿಗೆ ಇಲ್ಲ. ಇದಕ್ಕೆ ಬದಲಾಗಿ ಎಲ್ಲರಿಗೂ ಈಗ ಸಿಕ್ಕಿದೆ ಇ-ಡೈರಿ.
ಟ್ವಿಟರ್… ಫೇಸ್ ಬುಕ್… ಆರ್ಕುಟ್…
ಇದು ಆಧುನಿಕ ಸಂಪರ್ಕ ಸಾಧನಗಳು . ವ್ಯಕ್ತಿ ವ್ಯಕ್ತಿಗೆ ಕೊಂಡಿ ಕಲ್ಪಿಸುವ ಹಾಗೆಯೇ ವೈಯಕ್ತಿಕ ಒಳತೋಟಿಗಳನ್ನು ಹೊರಹಾಕುವ ಮಾಧ್ಯಮಗಳೂ ಆಗುತ್ತಿವೆ. ಒಂದರ್ಥದಲ್ಲಿ ಬ್ಲಾಗ್, ಫೇಸ್ ಬುಕ್ ಮೊದಲಾದ ಈ ಎಲ್ಲಾ ಮಾಧ್ಯಮಗಳು ‘ಆನ್ ಲೈನ್ ಡೈರಿ’ಯಂತೆ ಬಳಕೆಯಾಗುತ್ತಿವೆ.
ಹಿಂದೆಲ್ಲ ಹೊಸವರ್ಷ ಬಂದಾಕ್ಷಣ ಹೊಸ ಡೈರಿ ಕೊಂಡು ತಂದು ಅದರಲ್ಲಿ ಒಪ್ಪವಾಗಿ ಡೈರಿ ಬರೆಯುವುದಕ್ಕೆ ಶುರು ಮಾಡುತ್ತಿದ್ದವರು ಬಹಳ ಮಂದಿ. ಆದರ ಇಂದು ಹೀಗಿಲ್ಲ. ಮನೆಗೆ ಬಂದ ಮೇಲೆ ರಾತ್ರಿಯ ಹೊತ್ತು ಡೈರಿ ಹೊರತೆಗೆದು ಅದರಲ್ಲಿ ಚೆಂದದ ಅಕ್ಷರಗಳಿಂದ ಇಡೀ ದಿನದ ಅನುಭವಗಳನ್ನೆಲ್ಲ ಬರೆಯುವ ಪುರುಸೊತ್ತಾಗಲೀ, ವ್ಯವಧಾನವಾಗಲೀ ಯಾರಿಗೂ ಇಲ್ಲ. ಇಂಟರ್ನೆಟ್ ತೆರೆದು ಬ್ಲಾಗ್ ನಲ್ಲೋ, ಫೇಸ್ ಬುಕ್ ನಲ್ಲೋ ಟೈಪಿಸಿದರಾಯಿತು. ಅಳಿಸಿ ಹೋಗುತ್ತದೆಂಬ ಭಯವಿಲ್ಲ. ಪುಸ್ತಕ ಕಳೆದು ಹೋಗುವ ಹಿಂಜರಿಕೆಯೂ ಇಲ್ಲ.
ಬ್ಲಾಗ್ ಡೈರಿ
ದಿನಚರಿ ಪುಸ್ತಕವೇ ಆನ್ ಲೈನ್ ರೂಪದಲ್ಲಿ ಬಂದಂತಿರುವುದು ಬ್ಲಾಗ್ ಗಳಲ್ಲಿ. ಡೈರಿಗಳಲ್ಲಿ ಬರೆಯುವಂತೆ ಇಲ್ಲಿಯೂ ಸುದೀರ್ಘ ಬರಹಗಳನ್ನು ಬರೆಯುವವರೆಷ್ಟೋ ಜನ. ನಿತ್ಯದ ಬದುಕಿನಲ್ಲಿ ತಾವು ಕಂಡ ವಿಶಿಷ್ಟ ಘಟನೆ, ವಸ್ತು, ವಿಚಾರಗಳು, ಹೊಸ ಹೊಳಹುಗಳು, ಮನಸ್ಸಿನ ಒಳತೋಟಿ ಎಲ್ಲವೂ ಇಲ್ಲಿ ಬರಹ ರೂಪದಲ್ಲಿ ಮೂಡಿ ಬರುತ್ತದೆ. ಇತರರು ಓದುತ್ತಾರೆ ಎಂದು ಎಚ್ಚರದಿಂದ ಬರೆದವರು ಕೆಲವರಾದರೆ ತಮ್ಮ ಮನದಲ್ಲಿ ಮೂಡಿದ್ದೆಲ್ಲವನ್ನೂ ದಾಖಲಿಸುತ್ತಾ ಹೋಗುವವರು ಇನ್ನು ಕೆಲವರು. ಇದೀಗ ಜರ್ಮನಿಯಲ್ಲಿರುವ ಕನ್ನಡ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಈ ರೀತಿ ಬ್ಲಾಗಿಸುವವರಲ್ಲಿ ಒಬ್ಬರು. ಜರ್ಮನಿಗೆ ತೆರಳಿದ ಮೇಲಿಂದ ನಿಯಮಿತವಾಗಿ ಇಲ್ಲಿ ಬರೆಯುತ್ತಲೇ ಹೋಗಿದ್ದಾರೆ ಅವರು. ತಮ್ಮ ತಾಯಿಯವರು ತೀರಿಕೊಂಡ ಸಂದರ್ಭ ಮತ್ತು ಮಂಗಳೂರಿನ ವಿಮಾನ ದುರಂತದ ವೇಳೆ ತಮ್ಮ ಮನಸಿಗಾದ ನೋವನ್ನು ಬ್ಲಾಗ್ ನಲ್ಲಿ ದಾಖಲಿಸಿಕೊಂಡದ್ದು ಹೀಗೆ: ‘ಕಳೆದ ಒಂದು ವಾರದಿಂದ ನೋವು ಗಾಢವಾಗಿ ಆವರಿಸಿದೆ. ಮನಸ್ಸು ಎಲ್ಲ ಆಸಕ್ತಿಗಳನ್ನೂ ನಿರಾಕರಿಸಿದೆ. ದೈನಂದಿನ ಯಾವುದೇ ಚಟುವಟಿಕೆಗಳೂ ನಿಂತಿಲ್ಲ. ಆದರೆ ಅವು ಯಾವುದನ್ನೂ ಇಂದ್ರಿಯಗಳು ಸುಖಿಸುತ್ತಿಲ್ಲ. ಕಾತರ, ತಲ್ಲಣ, ಕುತೂಹಲ, ಬೆರಗು, ತೃಪ್ತಿ, ಸಿಟ್ಟು, ಯಾವುದೂ ಅಲ್ಲಿ ಇಲ್ಲ. ಚೇತನ ಜಡವಾಗಿದೆ. ಮನಸ್ಸು ವಿಷಣ್ಣವಾಗಿದೆ…’
ಇದೇ ರೀತಿ ತಮ್ಮ ಬ್ಲಾಗ್ ಗಳಲ್ಲಿ ತಮ್ಮ ಅಂತರಂಗದ ಮಾತುಗಳನ್ನು ದಾಖಲಿಸುತ್ತಿರುವವರು ಅದೆಷ್ಟೋ ಜನ.
ಕೆಲವರು ತಮ್ಮ ಪ್ರವಾಸದ ಸಂದರ್ಭದ ಅನುಭವಗಳನ್ನು ‘ಅಲೆಮಾರಿಯ ಅನುಭವಗಳು’ ಬ್ಲಾಗ್ ನಲ್ಲಿ ದಾಖಲಿಸಿದರೆ, ಪತ್ರಕರ್ತ ಶ್ರೀನಿವಾಸ ಗೌಡ ತಮ್ಮ ಬ್ಲಾಗ್ಗೆ ಇಟ್ಟಿರುವ ಹೆಸರೇ ‘ಖಾಸಗಿ ಡೈರಿ’ ಬದುಕಿನಂಗಳದಲ್ಲಿ ಕಂಡ ವಿಶಿಷ್ಟ ವ್ಯಕ್ತಿ , ಅನೂಹ್ಯ ಸಂಗತಿಗಳನ್ನು ಶಶಿಧರ ಭಟ್ರ ‘ಕುಮ್ರಿ’ ಬ್ಲಾಗ್ ದಾಖಲಿಸುತ್ತಾ ಹೋಗಿದ್ದರೆ ಬ್ಲಾಗಿಗರ ಬಾಳ ಹಾದಿಗೊಂದು ಕನ್ನಡಿಯಂತೆ ಮೂಡಿರುವುದು ‘ಓ ನನ್ನ ಚೇತನಾ’ ಬ್ಲಾಗ್. ನೋಡಿದ ಚಿತ್ರದ ಬಗೆಗಿನ ಅಭಿಪ್ರಾಯದಿಂದ ಹಿಡಿದು ಅಮೆರಿಕದ ಊರು, ಅನುಭವಗಳನ್ನು ಬರಹ, ಫೋಟೊಗಳಲ್ಲಿ ಸೆರೆಹಿಡಿಯುವ ಕ್ಯಾಲಿಫೋರ್ನಿಯಾದ ಹೇಮಶ್ರೀ ಅವರ ‘ಸ್ಮೈಲಿಂಗ್ ಕಲರ್ಸ್, ಎಲ್ಲೋ ಅಪರೂಪಕ್ಕೊಮ್ಮೆ ಬರಗಳನ್ನು ದಾಖಲಿಸುವ ರಾಧಿಕಾರ ‘ಮಧುಬನದಿ ರಾಧಿಕೆ’ ಒಂದೆಡೆ ಲಹರಿಯಂತೆ ಇನ್ನೊಂದೆಡೆ ಮನದ ಮಾತಿನಂತೆ ಬರೆಯುತ್ತ ಹೋಗುವ ‘ಕೆನೆ ಕಾಫಿ’, ಕನ್ನಡ- ಇಂಗ್ಲಿಷ್ ಭಾಷೆಗಳೆರಡರಲ್ಲೂ ಬ್ಲಾಗಿಗನ ಒಳಗನ್ನು ತೆರೆದಿಡುವ ‘ಅಂತರಂಗದ ಅಲೆಗಳು’ ಹೀಗೆ ಹುಡುಕುತ್ತ ಹೋದಷ್ಟೂ ವೈವಿಧ್ಯಮಯ ಬ್ಲಾಗ್ಗಳ ಸಾಲೇ ತೆರೆದುಕೊಳ್ಳುತ್ತದೆ.
ಗಂಭೀರ ಲೇಖನಗಳನ್ನು ಬರೆಯುವುದಕ್ಕೆ ಒಂದು ಬ್ಲಾಗ್, ಖಾಸಗಿ ವಿಚಾರಗಳನ್ನು ಬರೆಯುವುದಕ್ಕೆ ಇನ್ನೊಂದು-ಹೀಗೆ ಬಗೆಬಗೆಯ ಬ್ಲಾಗ್ಗಳನ್ನು ಮಾಡಿಕೊಂಡವರೂ ಅನೇಕರಿದ್ದಾರೆ.
ಶಾರ್ಟ್ ಅಂಡ್ ಸ್ವೀಟ್
ಬ್ಲಾಗ್ ಗಳಲ್ಲಿ ಕಾಣಿಸುವುದು ದೀರ್ಘ ಬರವಣಿಗೆಗಳಾದರೆ ಫೆಸ್ಬುಕ್, ಟ್ವಿಟರ್, ಆರ್ಕುಟ್ಗಳಲ್ಲಿ ಶಾರ್ಟ್ ಅಂಡ್ ಸ್ವೀಟ್ ಡೈರಿ ಬರಗಳು. ತಕ್ಷಣಕ್ಕೆ ಹೊಳೆದ ವಿಷಯವನ್ನು ಹೊಸ ವಿಚಾರಗಳನ್ನು ಇಲ್ಲಿ ಬರೆದು ಚರ್ಚೆಗೆ ಇತರರನ್ನು ಆಹ್ವಾನಿಸುವವರೂ ಉಮಟು. ಬೇರಾವುದೋ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿಕೊಂಡು ತನ್ನ ಭಾವನೆಗಳನ್ನ ದಾಖಲಿಸುತ್ತ ಹೋಗುವವರೂ ಇಲ್ಲಿದ್ದಾರೆ. ಏನೇ ಇದ್ದರೂ ಇಲ್ಲಿ ದೀರ್ಘ ಬರಹಗಳಿಲ್ಲ. ಆ ಕ್ಷಣಕ್ಕೆ ಹೊಳೆದ ಮಾತುಗಳನ್ನು ಕೆಲವೇ ಶಬ್ದಗಳಿಂದ ಹಿಡಿದು ಒಂದೆರಡು ವಾಕ್ಯಗಳಲ್ಲಿ ತಕ್ಷಣ ದಾಖಲಿಸುವುದಕ್ಕೆ ಇವು ಪೂರಕ. ಫೇಸ್ ಬುಕ್ ಅಂತೂ ಈ ನಿಟ್ಟಿನಲ್ಲಿ ತುಂಬಾ ಜನಪ್ರಿಯ.
ದೃಶ್ಯರೂಪ
ಈ ಆನ್ ಲೈನ್ ಮಾಧ್ಯಮಗಳೆಲ್ಲಾ ದಿನಚರಿಯ ದೃಶ್ಯರೂಪಗಳಾಗಿರುವುದು ಇನ್ನೊಂದು ವಿಶೇಷ. ಬ್ಲಾಗ್, ಫೇಸ್ಬುಕ್, ಅರ್ಕುಟ್ ಗಳೆಲ್ಲಲ್ಲ ತಮ್ಮ ಕುಟುಂಬಸ್ಥರ ಫೋಟೊಗಳು, ಪ್ರವಾಸದ ಸಂದರ್ಭದ ಚಿತ್ರಗಳು, ಇವೆಲ್ಲವನ್ನೂ ಅಪ್ಲೋಡ್ ಮಾಡುವವರು ಅದೆಷ್ಟೋ ಮಂದಿ. ತಮ್ಮ ಊರನ್ನು ಬಿಟ್ಟು ಪರ ಊರು, ವಿದೇಶಗಳೆಂದು ಹೊರ ಹೋದವರಿಗಂತೂ ಅಲ್ಲಿನ ತಮ್ಮ ಅನುಭವಗಳನ್ನು ತಾವು ಕಂಡ ದೃಶ್ಯಗಳನ್ನು ಶಾಶ್ವತವಾಗಿ ದಾಖಲಿಸುವುದಕ್ಕೆ ಇದಕ್ಕೀಂತ ಅತ್ಯುತ್ತಮ ಮಾಧ್ಯಮ ಬೇರಿಲ್ಲ. ಹಲವರು ತಮ್ಮ ಕಂದಮ್ಮಗಳ ಏಳು-ಬೀಳು , ಹೆಜ್ಜೆ ಇಡುವಿಕೆ ಹೀಗೆ ಮಗುವಿನ ಪ್ರತಿ ಹಂತದ ಬೆಳವಣಿಗೆಯನ್ನೂ ಫೋಟೊಗಳ ಮೂಲಕ ಇಲ್ಲಿ ಶಾಶ್ವತಗೊಳಿಸುವುದುಂಟು. ಫೋಟಗಳಮೂಲಕ ನೆನಪುಗಳನ್ನು ದಾಖಲಿಸುವುದಕ್ಕೆಂದೇ ರೂಪಿತವಾದ ಹಲವು ಬ್ಲಾಗ್ ಗಳೂ ಇವೆ .

No comments:

Post a Comment